ಶಿವಾಜಿ ಗಣೇಶನ್
	1927-2002. ತಮಿಳಿನ ಪ್ರಸಿದ್ಧ ನಟ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತ. ವಿಳ್ಳುಪ್ಪುರಮ್ ಚೆನ್ನಯ್ಯಪಿಳ್ಳೆ ಗಣೇಶನ್ ಎಂಬುದು ಇವರ ಪೂರ್ಣಹೆಸರು. ತಮಿಳುನಾಡಿನ ಶೀರ್ಕಾಳಿಯಲ್ಲಿ 1927ರಲ್ಲಿ ಜನ್ಮ. ಬಾಲ್ಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ದೊರಕಲಿಲ್ಲ. ಚಿಕ್ಕಂದಿನಲ್ಲಿಯೇ ರಂಗಭೂಮಿಯನ್ನು ಸೇರಿದರು. ಅಣ್ಣಾದೊರೈ ಅವರ ಶಿವಾಜಿ ಕಂಡ ಇಂದು ರಾಜ್ಯಮ್ ಎಂಬ ಚಾರಿತ್ರಿಕ ನಾಟಕ ಇವರಿಗೆ ಅಪಾರ ಪ್ರಸಿದ್ಧಿ ಯನ್ನು ತಂದುಕೊಟ್ಟಿತು. ಈ ನಾಟಕದಲ್ಲಿ ಶಿವಾಜಿಯ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ ಇವರು ಅನಂತರದಲ್ಲಿ ಶಿವಾಜಿ ಗಣೇಶನ್ ಎಂದೇ ಖ್ಯಾತರಾದರು. ಪರಾಶಕ್ತಿ (1952) ಎಂಬ ಚಿತ್ರ ಇವರ ಸ್ಥಾನವನ್ನು ತಮಿಳು ಚಿತ್ರರಂಗದಲ್ಲಿ ಭದ್ರಗೊಳಿಸಿತು. ಅನಂತರ ಅನೇಕ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದರು. ಭಾವುಕತೆಯ ಪಾತ್ರಗಳಲ್ಲಿ ಅಪಾರವಾಗಿ ಮಿಂಚಿದರು. ಇವರ ಅಭಿನಯ ಕೆಲವೊಮ್ಮೆ ಅತಿಯೇನೋ ಅನ್ನಿಸಿದರೂ ಪಾತ್ರದಲ್ಲಿನ ಇವರ ಅಭಿನಯ ತನ್ಮಯತೆ ಈ ಕೊರತೆಯನ್ನು ನೀಗಿಬಿಡುತ್ತಿತ್ತು. 

	ಪಣಂ (1952), ಅನ್ಬು (1953), ತಿರುಂಬಿಪಾರ್ (1953), ಅಂದನಾಳ್ (1954), ಕಲ್ಯಾಣಂ ಪಣ್ಣಿಯುಮ್ ಬ್ರಹ್ಮಚಾರಿ (1954), ಮೊದಲ್‍ತೇದಿ (1955), ಪೆಣ್ಣಿನ್ ಪೆರುಮೈ (1955), ಸಂಪೂರ್ಣ ರಾಮಾಯಣಂ (1958), ಸ್ಕೂಲ್‍ಮಾಸ್ಟರ್ (1958), ವೀರಪಾಂಡ್ಯ ಕಟ್ಟಬೊಮ್ಮನ್ (1959), ಪಾಶಮಲರ್ (1961), ಪಾಲುಂಪಳಮುಂ (1961), ಪಾವಮನ್ನಿಪ್ಪು (1961), ರಕ್ತತಿಲಕಂ (1963), ಕರ್ಣನ್ (1964), ನವರಾತ್ರಿ (1964), ಮೋಟಾರ್ ಸುಂದರಮ್ ಪಿಳ್ಳೈ (1966), ಕಂದನ್ ಕರುಣೈ (1967), ತಂಗೈ (1967), ತಿಲ್ಲಾನ ಮೋಹನಾಂಬಾಳ್ (1968), ಕಾವಲ್ ದೈವಂ (1969), ವಿಯಾಟ್ನಾಮ್ ವೀಡು (1970), ವಸಂತಮಾಳಿಗೈ (1972), ರಾಜರಾಜ ಚೋಳನ್ (1973), ತಂಗ ಪದಕಂ (1974), ತ್ರಿಶೂಲಂ (1979), ಮುದಲ್ ಮರ್ಯಾದೈ (1985), ಅಗ್ನಿಪುತ್ರುಡು (1987), ವೀರಪಾಂಡಿಯನ್ (1987), ದೇವರ್‍ಮಗನ್ (1992) - ಇವು ಇವರ ಅಭಿನಯದ ಕೆಲವು ಮುಖ್ಯಚಿತ್ರಗಳು. 

ತಮಿಳುನಾಡಿನ ರಾಜಕೀಯ ರಂಗದಲ್ಲಿಯೂ ಇವರು ಪ್ರಧಾನ ಪಾತ್ರವಹಿಸಿದ್ದರು. ಮೊದಲಿಗೆ ಅಣ್ಣಾದೊರೈಯವರ ಡಿ.ಎಂ.ಕೆ. (1949) ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅನಂತರ ಅದರಿಂದ ದೂರವಾಗಿ ಇ.ವಿ.ಕೆ. ಸಂಪತ್ ಅವರ ತಮಿಳ್ ನ್ಯಾಷನಲ್ ಪಕ್ಷ (1961) ಸೇರಿದರು. ಅನಂತರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದುಡಿದರು. ಕೆಲಕಾಲ ಇವರು ರಾಜ್ಯಸಭೆಯ ಸದಸ್ಯರಾಗಿದ್ದರು (1982-88). ಎಂ.ಜಿ.ರಾಮಚಂದ್ರನ್ (ಎಂಜಿಆರ್) ಹಾಗೂ ಇವರ ನಡುವೆ ಚಲನಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ತೀವ್ರ ಪೈಪೋಟಿ ಇತ್ತು. ಇವರ ಕಲಾ ಹಾಗೂ ರಾಜಕೀಯ ಜೀವನವನ್ನು ಆರಾಧಿಸಿ ಗಣೇಶನ್ ರಸಿಕರ್ ಮನ್ರಂ ಎಂಬ ನೂರಾರು ಅಭಿಮಾನಿ ಸಂಘಗಳು ತಮಿಳುನಾಡಿನಲ್ಲಿ ಹುಟ್ಟಿಕೊಂಡವು. ಇವರ ಜೀವಮಾನದ ಕಲಾ ಸಾಧನೆಗಾಗಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 2002 ಜುಲೈ 21ರಂದು ಚೆನ್ನೈನಲ್ಲಿ ನಿಧನರಾದರು. ಇವರ ಮಗ ಪ್ರಭು ಈಗ ತಮಿಳಿನ ಪ್ರಸಿದ್ಧ ನಟ.								
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ